Message from VC

Message from VC

ಕುಲಪತಿಗಳ ಮಾತು
ನಮ್ಮ ಪಾರಂಪರಿಕ ಕಲೆಗಳಾದ, ನಾಟಕ, ನೃತ್ಯ, ಸಂಗೀತ ಮುಂತಾದ ಪ್ರದರ್ಶಕ ಕಲೆಗಳನ್ನು ಪೋಷಿಸಿ, ಬೆಳೆಸುವ ಮತ್ತು ಸಂರಕ್ಷಿಸುವ ಸಲುವಾಗಿಯೇ ಕರ್ನಾಟಕ ಘನ ಸರ್ಕಾರವು ಖ್ಯಾತ ಹಿಂದೂಸ್ಥಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಸ್ಮರಣಾರ್ಥವಾಗಿ ನಮ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು 2007-08ರ ಆಯವ್ಯಯದಲ್ಲಿ ಘೋಷಣೆ ಮಾಡಿ 2008-09 ನೇ ಸಾಲಿನಿಂದ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು. ನಮ್ಮ ವಿಶ್ವವಿದ್ಯಾಲಯವು ಸಂಗೀತ ಮತ್ತು ಪ್ರದರ್ಶಕ ಕಲೆಗಳಿಗಾಗಿಯೇ ಮೀಸಲಾಗಿರುವ ದೇಶದಲ್ಲೇ ಎರಡನೆಯ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಭಾರತದ ಏಕೈಕ ವಿಶ್ವವಿದ್ಯಾಲಯ.

ನಮ್ಮ ವಿಶ್ವವಿದ್ಯಾಲಯದ ಬಹುಮುಖ್ಯವಾದ ಉದ್ದೇಶ ಸಂಗೀತಾದಿ ಕಲೆಗಳನ್ನು ಪೋಷಿಸಿ ಬೆಳಸುವುದರ ಜೊತೆಗೆ ದಾಖಲಿಸುವ ಕೆಲಸವನ್ನು ಮಾಡುತ್ತಿದೆ. ಇದರ ಜೊತೆಗೆ ನಮ್ಮಲ್ಲಿ ಸಂಗೀತ, ನೃತ್ಯ, ನಾಟಕ ತಬಲಾ, ಮೃದಂಗ, ವೀಣೆ ಮುಂತಾದ ವಿಭಾಗಗಳಲ್ಲಿ ಡಿಪ್ಲೋಮೊ, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿದೆ. ಇದರ ಜೊತೆಗೆ ಭಕ್ತಿ ಸಂಗೀತ, ಯೋಗ, ಸುಗಮ ಸಂಗೀತ ಮುಂತಾದ 16ಕ್ಕೂ ಹೆಚ್ಚು ಸರ್ಟಿಫಿಕೇಟ್ ಕೋರ್ಸುಗಳ ಸಂಜೆ ತರಗತಿಗಳನ್ನು ನಡೆಸುತ್ತಿದ್ದು ಇದರ ಸದುಪಯೋಗವನ್ನು ಅನೇಕ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

ನಮ್ಮ ವಿಶ್ವವಿದ್ಯಾಲಯವು ಇನ್ನೂ ಬೆಳವಣಿಗೆ ಹಂತದಲ್ಲಿದ್ದು, ಸಾಂಸ್ಕøತಿಕ ಚಟುವಟಿಕೆಗಳು ದ್ವಿಗುಣಗೊಳ್ಳುತ್ತಿವೆ. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಹಲವು ರೀತಿಯ ಶಿಬಿರ, ವಿಶೇಷ ಉಪನ್ಯಾಸಗಳು, ಮೌಲಿಕ ಕೃತಿಗಳ ಪ್ರಕಟಣೆ ಮಹತ್ವವಾದ ಯೋಜನೆಯನ್ನು ಹಾಕಿಕೊಂಡಿದೆ. ಈ ಎಲ್ಲಾ ಸಂಗತಿಗಳನ್ನು ಜನತೆಗೆ ಮುಟ್ಟಿಸುವ ಸಲುವಾಗಿ ‘ಕಲಾ ವಾಹಿನಿ’ ಎಂಬ ತ್ರೈಮಾಸಿಕ ವಾರ್ತಾ ಪತ್ರಿಕೆಯೂ ಪ್ರಕಟಗೊಳ್ಳುತ್ತಿದೆ.

ಒಟ್ಟಾರೆ ನಮ್ಮ ಆಕಾಂಕ್ಷೆ ಇರುವುದು ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳು ಸಾಮಾನ್ಯ ಜನರನ್ನು ತಲುಪಿಸುವುದರ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದು ಮತ್ತು ಜಾಗತೀಕರಣದ ಸಂದರ್ಭದಲ್ಲಿ ಪ್ರದರ್ಶಕ ಕಲೆಗಳು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೋಂಡು ಆ ನಿಟ್ಟಿನಲ್ಲಿ ಆಧುನಿಕ ಮಾದರಿಯ ಬೋಧನಾ ಮಾರ್ಗವನ್ನು ಅವಳಿಸಿಕೊಂಡು ಉನ್ನತ ಗುರಿಗಳನ್ನು ಸಾಧಿಸುವುದು.

ಪ್ರೊ. ನಾಗೇಶ್ ವಿ. ಬೆಟ್ಟಕೋಟೆ
ಕುಲಪತಿ (ಪ್ರಭಾರ)