ಕುಲಪತಿಗಳ ನುಡಿ:

ಪ್ರೊ . ನಾಗೇಶ್. ವಿ. ಬೆಟ್ಟಕೋಟೆ
ಕುಲಪತಿಗಳು

ಪ್ರಸ್ತುತ ವಸ್ತುಸ್ಥಿತಿಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಕಾಠಿಣ್ಯಕರವಾಗಿದೆ. ಕೋವಿಡ್ ಎನ್ನುವ ಮಹಾಮಾರಿ ಮನುಕುಲದ ಅಸ್ತಿತ್ವವನ್ನೇ ಅಲುಗಾಡಿಸಿದೆ. ಇದರಿಂದಾಗಿ ಅನೇಕ ಜನರು ತಮ್ಮ ದೈನಂದಿನ ಜೀವನವನ್ನು ಅನುಭವಿಸಲು ಶ್ರಮಿಸುತ್ತಿದ್ದಾರೆ. ತಮ್ಮ ಆರೋಗ್ಯ, ಉದ್ಯೋಗ, ಸಂಪತ್ತು ಎಲ್ಲವನ್ನೂ ಈ ತ್ವರಿತ ಸಾಂಕ್ರಾಮಿಕ ರೋಗದಿಂದ ಕಳೆದುಕೊಂಡಿದ್ದಾರೆ. ಇಡೀ ವಿಶ್ವವೇ ಇದರ ವಿರುದ್ಧ ಹೋರಾಡಲು ಪಣ ತೊಟ್ಟಿದೆ. ಮಾನವನ ಜೀವನವೇ ಇದಕ್ಕೆ ಬಲಿಯಾಗಿ, ತನ್ನ ಪಥವನ್ನೇ ಬದಲಾಯಿಸಿದೆ. ಉದ್ಯೋಗದ ಸ್ಥಳಗಳು ಮನೆಗಳಿಗೆ ವರ್ಗಾಯಿಸಲ್ಪಟ್ಟು ಗೃಹಗಳು ಬರಿಯ ವಾಸಸ್ಥಾನಗಳಾಗಿರದೆ ಉದ್ಯೋಗದ ಸ್ಥಳಗಳಾಗಿಯೂ ಬದಲಾಗಿರುವುದು ವಿಪರ್ಯಾಸ. ಅಧ್ಯಯನ ಮತ್ತು ಅಧ್ಯಾಪನ ಎರಡೂ ಆನ್ಲೈನ್ ಮಾಧ್ಯಮದ ಮೂಲಕ ನಡೆಯುವ ಬದಲಾವಣೆಯಾಗಿದೆ. ಹಿಂದಿನ ವ್ಯಾಪಾರ-ವ್ಯವಹಾರಗಳ ರೂಪವೇ ಬದಲಾಗಿ ನೂತನವಾದ ಕಾರ್ಯವಾಗಿ ಮಾರ್ಪಟ್ಟಿದೆ. ಇ-ಕಾಮರ್ಸ್ ಮತ್ತು ಮನೆ-ವಿತರಣೆ ಅಂತರ್ಜಾಲಗಳು ತ್ವರಿತವಾಗಿ ಬೆಳೆಯುವಲ್ಲಿ ಸಹಕಾರಿಯಾಗಿದೆ. ತಂತ್ರಜ್ಞಾನವು ಅಷ್ಟರಮಟ್ಟಿಗೆ ಇಂತಹ ಎಲ್ಲಾ ಕ್ಷೇತ್ರಗಳಲ್ಲಿ ಚಾಚಲ್ಪಟ್ಟಿದೆ. ಅದರಂತೆ ಮನೋರಂಜನೆ ಹಾಗೂ ಪ್ರದರ್ಶಕ ಕಲೆಗಳೂ ಸಹ ಹೊರತಾಗಿಲ್ಲ. ಈ ಎರಡು ವರ್ಷಗಳ ಕಾಲ ಸಿನಿಮಾ ನಿರ್ಮಾಪನೆ, ಸಂಗೀತ, ನೃತ್ಯ, ನಾಟಕ ಪ್ರದರ್ಶನಗಳು ವಿಶ್ವಾದ್ಯಂತ ಹೆಚ್ಚು-ಕಮ್ಮಿ ಸ್ತಬ್ಧವಾಗಿಯೇ ಹೋಗಿದ್ದವು. ಪ್ರೇಕ್ಷಕರು ತಮ್ಮ ಮನೋರಂಜನೆಗೆ ಅಂತರ್ಜಾಲವನ್ನೇ ನೆಚ್ಚಿಕೊಳ್ಳುವಷ್ಟರ ಮಟ್ಟಿಗೆ ಬದಲಾವಣೆಯಾಯಿತು. ಇದರ ಪರಿಣಾಮ ಪ್ರೇಕ್ಷಕರು ಆನ್ಲೈನ್ ಪ್ರದರ್ಶನವನ್ನು ವೀಕ್ಷಿಸುವುದರಿಂದ ಮತ್ತೆ ನೇರ ಪ್ರದರ್ಶನಗಳನ್ನು ಸಭಾಂಗಣಕ್ಕೆ ಬಂದು ವೀಕ್ಷಿಸುವರೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಪ್ರೇಕ್ಷಕರು ಕಲಾವಿದರ ಬಗ್ಗೆ ಅನುಕಂಪಕ್ಕಿಂತ ಹೆಚ್ಚಿನದನ್ನು ನೀಡುವಲ್ಲಿ ಅಂದರೆ ಮನೆ-ಮಠಗಳನ್ನು ಕಳೆದುಕೊಂಡ ಕಲಾವಿದರ ನೇರ ಪ್ರದರ್ಶನಗಳನ್ನು ವೀಕ್ಷಿಸಲು ಬಂದರೆ ಅದೇ ಸಾಕಾಗಿತ್ತು. ಅದೇ ಕಲಾವಿದರ ದೃಷ್ಟಿಯಿಂದ ಹೇಳುವುದಾದರೆ ಅವರೂ ಕೂಡ ಹಿಂದಿನ ರೂಢಿಯಲ್ಲಿನ ಪ್ರದರ್ಶನ ವ್ಯವಸ್ಥೆಯಿಂದ ಹೊರಬಂದು ಪ್ರಸ್ತುತ ತಂತ್ರಜ್ಞಾನಕ್ಕೆ ಹೊಂದಿಕೊಂಡಂತೆ ಪ್ರದರ್ಶನವನ್ನು ನೀಡುವುದು ಕೂಡಾ ಒಂದು ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಪ್ರದರ್ಶಕ ಕಲಾವಿದರು ತಮ್ಮನ್ನು ತಾವು ಅಣಿ ಮಾಡಿಕೊಳ್ಳುವುದು ಮತ್ತು ಅದನ್ನು ಅಳವಡಿಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ತನ್ಮೂಲಕ ಸಮಾಜವನ್ನು ಪ್ರಭಾವಿತಗೊಳಿಸುವುದು ಪ್ರಸ್ತುತ ಅವಧಿಯಲ್ಲಿ ಅನಿವಾರ್ಯವಾದ ಅಂಶವಾಗಿ ತೋರುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಘನ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ದಕ್ಷವಾಗಿ ಜಾರಿಗೊಳಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿಯಾದ ಈ ಬದಲಾವಣೆ ಶೈಕ್ಷಣಿಕ ಕಲಿಕೆಗೆ ನೂತನ ಆಯಾಮಗಳನ್ನು ತಂದುಕೊಟ್ಟಿದೆ. ಇದರಿಂದ ಹೆಚ್ಚಿನ ವಿಷಯಗಳ ಅಧ್ಯಯನ ಮಾಡಲು ಅನುಕೂಲವಾಗಿದೆ ಮತ್ತು ಉದೋಗ ಅವಕಾಶಗಳು ಸ್ಪಷ್ಟ್ಟಯಾಗಲಿವೆ. ಪ್ರದರ್ಶಕ ಕಲಾ ವಿದ್ಯಾರ್ಥಿಗಳು ಇದರಿಂದ ಬಹುಶಾಸ್ತ್ರೀಯ ವಿಷಯಗಳಿಂದ ಲಾಭ ಪಡೆಯ ಬಹುದಾಗಿದ್ದು ಕಲಾ ಕ್ಷೇತ್ರ ಸುಭದ್ರವಾಗಲಿದೆ ಎಂದು ಹಾರೈಸುತ್ತೇನೆ.