ಉದ್ದೇಶ ಮತ್ತು ಗುರಿ:

ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವು ಸಂಗೀತ ಮತ್ತು ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದ ಧ್ವನಿ-ದೃಶ್ಯ ಮುದ್ರಣ, ಹಸ್ತಪ್ರತಿ ಸಂಗ್ರಹ, ಧ್ವನಿ-ದೃಶ್ಯ ಸಂಗ್ರಹಾಲಯ ಸ್ಥಾಪನೆ, ಕಲಾ ದಿಗ್ಗಜರನ್ನು ಕುರಿತ ದಾಖಲೀಕರಣ, ಪುಸ್ತಕ ಪ್ರಕಟಣೆ ಮತ್ತು ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಪ್ರಸಾರಂಗದ ಮೂಲಕ ಗ್ರಂಥ ಪ್ರಕಟಣೆಯಂತಹ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಇನ್ನೂ ಹೆಚ್ಚು ಗ್ರಂಥ ಮಾಲೆಗಳನ್ನು ರೂಪಿಸಿ ಅವುಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಕಲಾವಿದರು, ಕಲಾರಸಿಕರು, ಸಂಶೋಧಕರು ಹಾಗೂ ಸಹೃದಯರನ್ನು ತಲುಪುವ ಅಭಿಲಾಷೆಯನ್ನು ಹೊಂದಿದೆ.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ಎಲ್ಲಾ ಶಾಖೆಗಳಲ್ಲಿ ಕಲಿಕೆಯ ಮುನ್ನಡೆಯನ್ನು ಸಾಧಿಸುವುದು. ಸಂಶೋಧನೆ ನಡೆಸುವುದು ಮತ್ತು ದಾಖಲಿಸುವುದು. ಕಲಾ ಪ್ರಕಾರಗಳ ಧ್ವನಿ ಮತ್ತು ದೃಶ್ಯ ರೆಕಾರ್ಡಿಂಗ್‍ಗಳನ್ನು ಪ್ರಕಟಿಸುವ ಮತ್ತು ಜನಪ್ರಿಯಗೊಳಿಸುವ ಮತ್ತು ಅವುಗಳ ಅನನ್ಯತೆಯನ್ನು ನಿರಂತರವಾಗಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಇದನ್ನು ಹೊರತುಪಡಿಸಿ ವಿಶ್ವವಿದ್ಯಾಲಯವು ಉತ್ತಮ ಗುಣಮಟ್ಟ ಹೊಂದಿರುವ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನೊಳಗೊಂಡ ಆಡಳಿತಾಂಗ, ಪರೀಕ್ಷಾಂಗ, ಗ್ರಂಥಾಲಯ, ವಸತಿನಿಲಯ, ಬ್ಯಾಂಕ್, ರಂಗಮಂದಿರ, ಗಣ್ಯರಿಗೆ ಮೀಸಲಿರಿಸಿದ ಕಟ್ಟಡ ಹೀಗೆ ಕಟ್ಟಡಗಳನ್ನು ಹೊಂದಿದ ಪಾರಂಪರಿಕ ಶೈಲಿಯ ಕ್ಯಾಂಪಸ್ ನಿರ್ಮಾಣ ಮಾಡಿ ತನ್ನ ಉತ್ತಮ ಕಾರ್ಯಸಾಧನೆಗಳಿಂದ ಸರ್ವಾಂಗೀಣ ಸುಂದರವಾದ, ಕಲಾತ್ಮಕವಾದ ಕಟ್ಟಡಗಳನ್ನು ಕಟ್ಟಲು ಆಲೋಚಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.